ಅಣ್ಣಾವ್ರ ವ್ಯಕ್ತಿತ್ವವೇ ಸ್ಪೂರ್ತಿಯ ಚಿಲುಮೆ
ಸಿನಿಮಾ ವಿಷಯ ಬಂದಾಗ ಬಳ್ಳಾರಿಯ ಜನರು ಕನ್ನಡ ಮತ್ತು ತೆಲುಗು ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ. ಒಂದೆಡೆ ರಾಜ್ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಅವರನ್ನು ಇಷ್ಟಪಟ್ಟರೆ ಇನ್ನೊಂದೆಡೆ ಎನ್.ಟಿ.ಆರ್, ಎ.ಎನ್.ಆರ್, ಹಾಗೂ ಕೃಷ್ಣ ಅವರ ಚಿತ್ರಗಳನ್ನು ಸಹ ನೋಡುತ್ತಿದ್ದರು. ರಾಜ್ಕುಮಾರ್ ಮತ್ತು ಎನ್ಟಿಆರ್ ಇಬ್ಬರನ್ನು ಅತೀವವಾಗಿ ಪ್ರೀತಿಸುತ್ತಿದ್ದರು. ಇಬ್ಬರು ನಟರ ಚಿತ್ರಗಳು ಶತದಿನೋತ್ಸವ ಆಚರಿಸುತ್ತಿತ್ತು. ನಾನು ಕೂಡ ಈ ಮಹಾನ್ ನಟರ ಚಿತ್ರಗಳನ್ನು ನೋಡುತ್ತಾ ಬೆಳೆದವನು. ನನಗೆ ವರನಟ ಡಾ. ರಾಜ್ಕುಮಾರ್ ನಟನೆಯ ಜೊತೆಗೆ ಸರಳತೆ ಮತ್ತು ವ್ಯಕ್ತಿತ್ವದಿಂದಲೂ ಬಹಳಷ್ಟು ಪ್ರಭಾವ ಬೀರಿದ್ದರು. ನನಗೆ ನೆನಪಿರುವಂತೆ ನಾನು ನೋಡಿದ ಮೊದಲ ಚಿತ್ರ ಎ.ಎನ್.ಆರ್ ಅಭಿನಯದ ‘ಪ್ರೇಮ್ನಗರ್’. ಆಗ ನನಗೆ 5-6 ವರ್ಷ ಅನಿಸುತ್ತದೆ. ಬಳ್ಳಾರಿಯ ‘ರಾಯಲ್ ಟಾಕೀಸ್’ನಲ್ಲಿ ಆ ಚಿತ್ರ ನೋಡಿದ್ದೆ. ಆ ಚಿತ್ರದಲ್ಲಿ ನಾಯಕ ಅದ್ಧೂರಿ ಕಾರಿನಲ್ಲಿ ಬರುವ ಸನ್ನಿವೇಶಗಳು ಹಾಗೂ ಆ ಚಿತ್ರದ ಹಾಡುಗಳು ಸೇರಿದಂತೆ ಅನೇಕ ಸಂಗತಿಗಳು ಇಂದಿಗೂ ಮೆದುಳಲ್ಲಿ ಅಚ್ಚಾಗಿದೆ.