
ನಾನು ಹುಟ್ಟಿದ್ದು 1967 ರಲ್ಲಿ… ನಮ್ಮ ತಂದೆ ಶಿಸ್ತಿನ ಸ್ವಭಾವದ ವ್ಯಕ್ತಿ. ನಾನು ಕೊನೆ ಮಗ ಎಂಬ ಕಾರಣಕ್ಕೆ ಅತಿ ಹೆಚ್ಚು ಪ್ರೀತಿಯೇ ಇತ್ತು. ನನ್ನ ಹುಟ್ಟುಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸುತ್ತಿದ್ದರು. ಚಿಕ್ಕವನು ಎಂಬ ಕಾರಣಕ್ಕೆ ನನ್ನ ಮನೆಯವರೆಲ್ಲರೂ ನನ್ನ ಕುರಿತಾಗಿ ಹೆಚ್ಚು ಕಾಳಜಿ ವಹಿಸುತ್ತಿದ್ದರು. ನಾನು ಮೂರನೇ ವಯಸ್ಸಿನಲ್ಲಿರುವಾಗಲೇ ಅಪ್ಪ-ಅಮ್ಮ ನನಗೆ ಮನೆಪಾಠ ಆರಂಭಿಸಿದರು. ಇದರಿಂದಾಗಿ ನಾನು ಆರನೇ ವಯಸ್ಸಿಗೆ ಬರುವ ವೇಳೆಗಾಗಲೇ ಓದಿನ ವಿಷಯದಲ್ಲಿ ಚುರುಕಾಗಿದ್ದೆ. ನಮ್ಮ ತಂದೆಯವರು ನನ್ನನ್ನು ಒಂದನೇ ತರಗತಿ ಸೇರಿಸಲು ಕರೆದು ಹೋದಾಗ ಶಿಕ್ಷಕರ ಎದುರು ನನ್ನನ್ನು ನಿಲ್ಲಿಸಿ ನನ್ನ ಮಗನಿಗೆ ನೀವು ಹೇಗೆ ಬೇಕಾದರೂ ಪರೀಕ್ಷಿಸಿ ಆತನನ್ನು ಐದನೇ ತರಗತಿಯ ವಿದ್ಯಾರ್ಥಿಗಳಿಗೆ ಸರಿ ಸಮನಾಗಿ ಟ್ರೈನ್ ಮಾಡಿದ್ದೇನೆ ಎಂದರು. ಆಗ ನನ್ನನ್ನು ಪರೀಕ್ಷಿಸಿದ ಶಿಕ್ಷಕರು ನನ್ನ ಪ್ರತಿಭೆ ಮೆಚ್ಚಿ ನೇರವಾಗಿ ನನ್ನನ್ನು ಎರಡನೇ ತರಗತಿಗೆ ಸೇರಿಸಿಕೊಂಡರು. ಹೀಗೆ ಓದು ಮತ್ತು ಆದರ್ಶದ ವಿಷಯ ಬಂದಾಗ ಅಪ್ಪನೇ ನನ್ನ ಮೊದಲ ಗುರು. ಹರಪನಹಳ್ಳಿ ಸಮೀಪದಲ್ಲಿರುವ ಹಲವಾಗಿಲು ಗ್ರಾಮದಲ್ಲಿ ನಾನು ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದೆ. ಚಿಕ್ಕಂದಿನಿಂದಲೂ ನನಗೆ ಹಠ ಜಾಸ್ತಿ. ಆಟ-ಪಾಠದಲ್ಲಿ ಗೆಲ್ಲಲೇಬೇಕೆಂಬ ಕನಸಿತ್ತು. ಅದರಲ್ಲೂ ವಿಶೇಶವಾಗಿ ಆಟಗಳಲ್ಲಿ ಸೋಲುವುದನ್ನು ಒಪ್ಪಿಕೊಳ್ಳಲು ಸಿದ್ದನಿರುತ್ತಿರಲಿಲ್ಲ. ಗ್ರಾಮೀಣ ಕ್ರೀಡೆಗಳಾದ ಕಬಡ್ಡಿ, ಕೋ-ಕೋ, ಚಿನ್ನಿ ದಾಂಡು, ಬುಗುರಿ, ಗೋಲಿಯಾಟ ಸೇರಿದಂತೆ ಎಲ್ಲ ರೀತಿಯ ಆಟಗಳನ್ನು ಆಡುತ್ತಿದ್ದೆ. ನಮ್ಮ ಮನೆ ಪೊಲೀಸ್ ಕ್ವಾಟರ್ಸ್ನಲ್ಲಿ ಇದ್ದದ್ದರಿಂದ ಅಲ್ಲಿನ ವಾತಾವರಣವೇ ಹೊಸತೊಂದು ಅನುಭವ ನೀಡುತ್ತಿತ್ತು. ಹಲವಾಗಿಲು ಗ್ರಾಮದಲ್ಲಿ ನಿಜಲಿಂಗಪ್ಪನವರು ತಮ್ಮ ಆಡಳಿತಾವಧಿಯಲ್ಲಿ ಸುಸಜ್ಜಿತ ಪೊಲೀಸ್ ಕ್ವಾರ್ಟರ್ಸ್ ನಿರ್ಮಾಣ ಮಾಡಿಸಿದ್ದರು. ಪೊಲೀಸ್ ಮಕ್ಕಳು ಎಂಬ ಕಾರಣಕ್ಕೆ ನಮಗೆ ಕನಿಷ್ಠ ಸೌಲಭ್ಯಗಳು ಪೊಲೀಸ್ ಕ್ವಾರ್ಟರ್ಸ್ ನಲ್ಲಿಯೇ ಸಿಗುತ್ತಿದ್ದವು. ಉತ್ತಮವಾದ ಆಟದ ಮೈದಾನವಿತ್ತು. ಜಾತಿ-ಮತ-ಪಂಥದ ಭೇಧವಿರಲಿಲ್ಲ. ಪೊಲೀಸರ ಮಕ್ಕಳೆಲ್ಲರೂ ಒಟ್ಟಾಗಿ ಆಡುತ್ತಿದ್ದೆವು. ಬದುಕು ಮತ್ತು ಮನಸ್ಸಿನಲ್ಲಿ ನಿರಾಳತೆ ಹಾಗೂ ನಿಷ್ಕಲ್ಮಶ ಸ್ನೇಹ ಮಾತ್ರ ಮನೆ ಮಾಡಿತ್ತು. ನನ್ನ ನೆನಪಿನ ಶಕ್ತಿ ಅಗಾಧ. ನನ್ನ ಬಾಲ್ಯದ ಬಹುತೇಕ ನೆನಪುಗಳು, ಸಂಗತಿಗಳು ಇಂದಿಗೂ ನನ್ನ ಮನಸಲ್ಲಿ ಹಸಿರಾಗಿದೆ.
ನನ್ನ ಜನ್ಮಸ್ಥಾನ ಬಳ್ಳಾರಿ
ಈಗ ಬಳ್ಳಾರಿ ಸಾಕಷ್ಟು ಅಭಿವೃದ್ಧಿಯಾಗಿದೆ. ಸಂಪೂರ್ಣವಾಗಿ ನಗರಪ್ರದೇಶವಾಗಿದೆ. ಆದರೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಾಗ ಬಳ್ಳಾರಿಯ ದುರ್ಗಮ್ಮ ಸಿಡಿಬಂಡೆ ಜಾತ್ರೆ ಹಾಗೂ ಕೋಟೆ ಮಲ್ಲೇಶ್ವರ ರಥೋತ್ಸವ ನೆನಪಾಗುತ್ತದೆ. ಅಲ್ಲದೇ ಬಳ್ಳಾರಿಯ ರಥಬೀದಿಯ ವೈಭವ ಕಣ್ಮುಂದೆ ಮರುಕಳಿಸುತ್ತದೆ. ಚಿಕ್ಕಂದಿನಲ್ಲಿ ನಾವು ಪ್ರತಿವರ್ಷ ಜಾತ್ರೆ ನಡೆಯುತ್ತಿದ್ದ ಆ ಎರಡು ದಿನಗಳನ್ನು ಎದುರು ನೋಡುತ್ತಿದ್ದೆವು. ನಮ್ಮ ತಂದೆ ತಾಯಿಗೆ ನಾವು ನಾಲ್ವರು ಮಕ್ಕಳು. ನಮ್ಮೆಲ್ಲರನ್ನು ಅಪ್ಪ-ಅಮ್ಮ ಜಾತ್ರೆಗೆ ಕರೆದೊಯ್ಯುತ್ತಿದ್ದರು. ಅಪ್ಪ ಕೊಡಿಸುತ್ತಿದ್ದ ಆಟದ ಸಾಮಾನುಗಳು ನೀಡುತ್ತಿದ್ದ ಖುಷಿಯೇ ಬೇರೆ. ಅಲ್ಲಿ ಒಟ್ಟಾಗಿ ಕುಳಿತು ಬಿಸಿ ಬಿಸಿ ಮಿರ್ಚಿ ಮಂಡಕ್ಕಿ ತಿಂದ ಕ್ಷಣ ಈ ಹೊತ್ತಿಗೂ ತುಂಬಾನೇ ನೆನಪಾಗುತ್ತದೆ. ಇಂದು ನಾವು ದೇಶ ದೇಶಗಳನ್ನು ಸುತ್ತಿ ಬಂದರೂ ಬಾಲ್ಯದ ನೆಮ್ಮದಿ ಮತ್ತೆಲ್ಲೂ ಕಾಣ ಸಿಗುವುದಿಲ್ಲ.ಬಳ್ಳಾರಿಯೊಡನೆ ಬೆಸೆಯಿತು ಬಂಧ
ನಮ್ಮ ತಂದೆಯ ಪೂರ್ವಿಕರು ಸುಸಂಸ್ಕೃತರು ಮತ್ತು ಆರ್ಥಿಕವಾಗಿ ಸ್ಥಿತಿವಂತರಾಗಿದ್ದರು. ನಮ್ಮ ತಾತ ಮುತ್ತಾತಂದಿರು ತಿರುಪತಿಯಲ್ಲಿ ಜಮೀನ್ದಾರರಾಗಿದ್ದರು. ದಾನ-ಧರ್ಮದಿಂದಲೇ ಎಲ್ಲವನ್ನು ಕಳೆದುಕೊಂಡ ಮನೆತನ. ನಮ್ಮ ತಾತ ರಾಮರೆಡ್ಡಿಯವರು ಸ್ವಾತಂತ್ರ್ಯ ಹೋರಾಟಗಾರರು. ಬ್ರಿಟಿಷರ ದಬ್ಬಾಳಿಕೆಯನ್ನು ವಿರೋಧಿಸಿ ಹೋರಾಟ ಮಾಡಿದವರು. ಬದಲಾದ ಸನ್ನಿವೇಶದಲ್ಲಿ ನಮ್ಮ ತಂದೆ ಸ್ವತಂತ್ರವಾಗಿ ದುಡಿಯುವ ಗುರಿಯೊಂದಿಗೆ ಚೆನ್ನೈಗೆ ಬಂದರು. ಅಲ್ಲಿ ತಂದೆ ನಮ್ಮ ತಂದೆ ಚೆಂಗಾ ರೆಡ್ಡಿ ಪೊಲೀಸ್ ಇಲಾಖೆಗೆ ಆಯ್ಕೆಯಾದರು. 1983 ರ ತನಕ ಅಪ್ಪ ಆರಕ್ಷಕ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ನಿವೃತ್ತಿಯಾಗುವ ವೇಳೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದರು. ನಮ್ಮ ತಂದೆ ಶಿಸ್ತಿನ ಸಿಪಾಯಿ ಅಂದರೆ ತಪ್ಪಾಗಲಾರದು. ಇನ್ನು ನನ್ನ ತಾಯಿ ರುಕ್ಮಿಣಿ ಗೃಹಿಣಿ. ನಮ್ಮ ಅಪ್ಪ-ಅಮ್ಮನ ನಡುವಿನ ಒಡನಾಟ ಅದ್ಭುತವಾಗಿತ್ತು. ಕಷ್ಟ-ಸುಖಗಳೆರಡನ್ನು ಒಟ್ಟಿಗೆ ನಿಭಾಯಿಸಿದ ಜೋಡಿಜೀವ. ನಮ್ಮ ತಂದೆ- ತಾಯಿಗೆ ನಾವು ನಾಲ್ವರು ಮಕ್ಕಳು. ಅಕ್ಕ ರಾಜೇಶ್ವರಿ ಹಿರಿಯಾಕೆ. ಆ ಬಳಿಕ ಕ್ರಮವಾಗಿ ಅಣ್ಣಂದಿರಾದ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಹಾಗೂ ನಾನು ಜನಿಸಿದೆವು.