1989 ರಲ್ಲಿ ಬದುಕು ಬದಲಾಯ್ತು
1989 ರಲ್ಲಿ ನಾನು ಉದ್ಯಮ ಆರಂಭಿಸಿದೆ. ಒಂದು ಪಬ್ಲಿಕ್ ಲಿಮಿಟೆಡ್ ಕಂಪೆನಿಯನ್ನು ನನ್ನ ಜ್ಞಾನಾರ್ಜನೆಯನ್ನೇ ಬಂಡವಾಳಗಿಟ್ಟುಕೊಂಡು ಪ್ರಮೋಟ್ ಮಾಡಲು ಆರಂಭಿಸಿದೆ. ಬಳ್ಳಾರಿಯನ್ನೇ ಹೆಡ್ ಆಫೀಸ್ ಆಗಿಟ್ಟುಕೊಂಡು ಕಾರ್ಯಾರಂಭ ಮಾಡಿದೆ. ಹಂತ ಹಂತವಾಗಿ ಸಂಸ್ಥೆಯನ್ನು ವಿಸ್ತರಿಸುತ್ತಾ ಹೋದೆ. ಕರ್ನಾಟಕ, ಆಂಧ್ರ, ತಮಿಳುನಾಡಿನಲ್ಲಿ ಒಟ್ಟಾರೆಯಾಗಿ 125 ಬ್ರಾಂಚ್ಗಳನ್ನು ಆರಂಭಿಸಿದೆ. ಇದರಿಂದ 4000 ಕ್ಕೂ ಹೆಚ್ಚು ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಯ್ತು. 1989 ರಿಂದ 2003 ರ ತನಕ 14 ವರ್ಷಗಳ ಕಾಲ ನನ್ನ ಫೈನಾನ್ಸ್ ಕಂಪೆನಿಯನ್ನು ಯಶಸ್ವಿಯಾಗಿ ನಡೆಸಿದೆ. ಯಾವತ್ತಿಗೂ ನನ್ನ ಸಂಸ್ಥೆ ಆರ್.ಬಿ.ಐ. ನಿಯಮಾವಳಿಗಳನ್ನು ಗಾಳಿಗೆ ತೂರಲಿಲ್ಲ. ಯಾರೊಬ್ಬರಿಗೂ ಮೋಸ ಮಾಡದೇ ಪ್ರಾಮಾಣಿಕವಾಗಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದೆ. ಈ 14 ವರ್ಷದ ಅವಧಿಯಲ್ಲಿ ದೇಶದಲ್ಲಿ ಸಾವಿರಾರು ಫೈನಾನ್ಸ್ ಕಂಪೆನಿಗಳು ದಿವಾಳಿಯಾದವು. ಆರ್.ಬಿ.ಐ ನಿಯಾಮಾವಳಿಗಳನ್ನು ಗಾಳಿಗೆ ತೂರಿ ಗ್ರಾಹಕರನ್ನು ವಂಚಿಸಿದವು. ಆದರೆ ನಾನು ನನ್ನ ಸಂಸ್ಥೆಯ ಪ್ರತಿ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡೆ. ಆ ಬಗ್ಗೆ ಇಂದಿಗೂ ನನಗೆ ಹೆಮ್ಮೆಯಿದೆ.