ಸವಾಲುಗಳನ್ನು ಮೆಟ್ಟಿ ನಿಲ್ಲುವುದೇ ಸಾಧನೆ

1990 ರ ಜನವರಿಯಲ್ಲಿ ನಮ್ಮ ತಂದೆ ತೀರಿಕೊಂಡರು. ಅದೇ ವರ್ಷ ನನ್ನ ಸ್ನೇಹಿತ ಶ್ರೀರಾಮುಲು ಅವರ ಸೋದರಮಾವನವರ ಹತ್ಯೆಯಾಯ್ತು. ಈ ಮಧ್ಯೆ ನಾನು ಹಂತ ಹಂತವಾಗಿ ಉದ್ಯಮಿಯಾಗಿ ಬೆಳೆದೆ. ಶ್ರೀ ರಾಮುಲು ರಾಜಕೀಯವಾಗಿ ಬೆಳೆದ. 1995 ರಲ್ಲಿ ಮೊದಲ ಬಾರಿಗೆ ನಗರ ಸಭೆ ಸದಸ್ಯರಾಗಿ ಆಯ್ಕೆಯಾದರು. ಇನ್ನೊಂದೆಡೆ ನನಗೆ ನಮ್ಮ ಬಳಿ ‘ಎನೋಬಲ್ ಸಂಸ್ಥೆ’ಗಾಗಿ ಸಾರ್ವಜನಿಕರಿಂದ ಶೇಖರಿಸಿದ 20% ಹಣವಿತ್ತು. ಅದರಿಂದ ‘ಎನೋಬಲ್ ಏರ್‍ವೇಸ್’ ಎಂಬ ವಿಮಾನಯಾನ ಸಂಸ್ಥೆ ಆರಂಭಿಸುವ ಕನಸು ನನ್ನಲ್ಲಿತ್ತು. ಈ ಯೋಜನೆಯ ಪ್ರಸ್ತಾವನೆ ಸಲ್ಲಿಸಿದಾಗ ಇದಕ್ಕೆ ಬ್ಯಾಂಕ್‍ನಿಂದ ಲೋನ್ ಕೂಡ ಲಭ್ಯವಾಯ್ತು. ಬಳ್ಳಾರಿಯಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾದ ಏರ್ ಪೋರ್ಟ್ ಇತ್ತು. ಆ ಕಾಲದಲ್ಲಿ ಜೆ.ಆರ್.ಡಿ.ಟಾಟಾ ಅವರು ಬಾಂಬೆಯಿಂದ ಬಳ್ಳಾರಿಗೆ ವಿಮಾನದ ಮೂಲಕ ಬಂದು ತಂಗಿದ್ದರು ಎಂದು ಹೇಳಲಾಗುತ್ತದೆ. ಆಗ ನಾನು 20 ಸೀಟರ್ ಕ್ಯಾಪಾಸಿಟಿಯುಳ್ಳ ಮೂರು ವಿಮಾನಗಳನ್ನು ಖರೀದಿಸಿದೆ. ಅದರ ರನ್ ವೇ ನಮಗೆ 20 ಸೀಟರ್ ವಿಮಾನದ ಬಳಕೆಗೆ ಸಾಕಾಗಿತ್ತು. ಬಳ್ಳಾರಿಯಲ್ಲಿ ವಿಮಾನಯಾನ ಆರಂಭಿಸಬೇಕು ಎನ್ನುವ ಮಹತ್ತರ ಯೋಜನೆ ನನ್ನೊಳಗಿತ್ತು. ಆದರೆ ಆ ಸಂದರ್ಭದಲ್ಲಿ ನಮ್ಮ ಆತ್ಮೀಯರೊಬ್ಬರಿಂದ ಸಿಕ್ಕ ಸಲಹೆ ಸೂಚನೆ ನಾವು ಆ ಯೋಜನೆಯನ್ನು ಕೈ ಬಿಡುವಂತೆ ಮಾಡಿತು.

ಅನಂತರದ ದಿನಗಳಲ್ಲಿ ನಾವು ‘ಓಬಳಾಪುರಂ ಮೈನಿಂಗ್ ಕಂಪೆನಿ’ಯಲ್ಲಿ ಹೂಡಿಕೆ ಮಾಡುವ ಅವಕಾಶ ಸಿಕ್ಕಿತು. ನಮ್ಮೂರಿಗೆ ಹತ್ತಿರದಲ್ಲಿರುವ ಕಾರಣಕ್ಕೆ ಧೈರ್ಯ ಮಾಡಿ ಬಂಡವಾಳ ಹೂಡುವ ರಿಸ್ಕ್ ತೆಗೆದುಕೊಂಡೆ. ಏಕೆಂದರೆ ಗ್ರಾನೈಟ್‍ಗೆ ಇದ್ದ ವ್ಯಾಲ್ಯೂ ಕಬ್ಬಿಣದ ಅದಿರಿಗೆ ಇರಲಿಲ್ಲ. ಇದಲ್ಲದೆ ಕಬ್ಬಿಣದ ಅದಿರಿನ ಮೈನ್ ಎಂದರೆ ಕಿರಾಣಿ ಅಂಗಡಿಯವ ಕೂಡ ಸಾಲ ಕೊಡುತ್ತಿರಲಿಲ್ಲ. ಆಗ ಎಲ್ಲರೂ ಇದನ್ನು ಮಾಡಬೇಡಿ ಎಂದರೂ ನಾನು ಮತ್ತು ಶ್ರೀರಾಮುಲು ಭಂಡ ಧೈರ್ಯ ಮಾಡಿ 2000 ನೇ ಇಸವಿಯಲ್ಲಿ ಕೊಂಡುಕೊಂಡೆವು. 2001 ರಲ್ಲಿ ನಮ್ಮ ಹೆಸರಿಗೆ ವರ್ಗಾವಣೆಯಾಯಿತು. ಆದರೆ ಅದಕ್ಕೆ ಅಗತ್ಯವಾದ ಒಪ್ಪಿಗೆಯನ್ನು ಕೇಂದ್ರದ ನಾನಾ ಇಲಾಖೆಗಳಿಂದ ಪಡೆದುಕೊಳ್ಳಲು ಮೂರು ವರ್ಷ ಕಾಯಬೇಕಾಯ್ತು. 2003 ರಲ್ಲಿ ನಾವು ಅಧಿಕೃತವಾಗಿ ರಫ್ತು  ಆರಂಭಿಸಿದೆವು. ಎಂಎಂಟಿಸಿ ಮೂಲಕ ವಿದೇಶಕ್ಕೆ ಮೂರು ಶಿಪ್‍ಮೆಂಟ್‍ಗಳನ್ನು ಕಳುಹಿಸಿದೆವು. ಈ ಮಧ್ಯೆ ಆಗಿನ ಪ್ರಧಾನಿಗಳಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ತಂದ ಹೊಸ ರಫ್ತು ನೀತಿಯಿಂದ ನಾವು ಕೊಂಡ ಮಣ್ಣಿಗೆ ಚಿನ್ನದ ಬೆಲೆ ಬಂತು. ಅದೃಷ್ಟ ಚೆನ್ನಾಗಿದ್ದಾಗ ಮಣ್ಣು ಕೂಡ ಬಂಗಾರವಾಗುತ್ತೆ ಎಂಬ ಜನಜನಿತ ಮಾತು ನನ್ನ ವಿಷಯದಲ್ಲಿ ನಿಜವಾಯ್ತು. ಬಳ್ಳಾರಿಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ಗುರಿ ನಮ್ಮಲ್ಲಿತ್ತು. ಬಳ್ಳಾರಿ ಬೀದಿ ದೀಪಗಳನ್ನೇ ಕಾಣದ ನಗರವಾಗಿತ್ತು. ಎಲ್ಲೋ ಒಂದೆರಡು ಪ್ರಮುಖ ರಸ್ತೆಗಳನ್ನು ಹೊರತು ಪಡಿಸಿದರೆ ಬೇರೆಲ್ಲೂ ಶ್ರೀಸಾಮಾನ್ಯರು ಓಡಾಡದಂತಹ ಪರಿಸ್ಥಿತಿಯಿತ್ತು. ಬೆಂಗಳೂರಿನ ನಂತರ ಅತಿ ಹೆಚ್ಚು ಸ್ಲಂ ಏರಿಯಾವನ್ನು ಹೊಂದಿದ್ದ ನಗರ ಎಂಬ ಕುಖ್ಯಾತಿಗೆ ಬಳ್ಳಾರಿ ಪಾತ್ರವಾಗಿತ್ತು. ಅಂಥ ಸಂದರ್ಭದಲ್ಲಿ ಶ್ರೀ ರಾಮುಲು ಅಭಿವೃದ್ಧಿಗೆ ಹೊಸ ಅರ್ಥ ಕೊಟ್ಟರು. ಬಳ್ಳಾರಿಗೆ ಹೊಸ ರೂಪ ನೀಡಿದರು. ಆತನಿಗೆ ಅವಶ್ಯವಾದ ಆರ್ಥಿಕ ಚೈತನ್ಯವನ್ನು, ಆತ್ಮಸ್ಥೈರ್ಯವನ್ನು ನಾನು ನೀಡುತ್ತಾ ಬಂದೆ. ಆರಂಭದ ದಿನಗಳಲ್ಲಿ ಶ್ರೀರಾಮುಲು ಬರಿಗಾಲಲ್ಲಿ ಪ್ರತಿ ಮನೆ ಮನೆಗೆ ತಿರುಗಿದ. 1999 ರಲ್ಲಿ ಶ್ರೀ ರಾಮುಲು ಚುನಾವಣೆಯಲ್ಲಿ ಸೋತಿದ್ದರು. ಆದರೂ ಜನರಿಂದ ದೂರ ಸರಿಯದೇ ಸತತವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸಿದ್ದರು. 2001 ರಲ್ಲಿ ನಗರಸಭೆ ಎಲೆಕ್ಷನ್‍ನಲ್ಲಿ ಭರ್ಜರಿ ಬಹುಮತವುಳ್ಳ ಗೆಲುವು ಸಿಕ್ಕಿತು. 2004 ರ ವೇಳೆಗಾಗಲೇ ಆವು ನಮ್ಮ ಸ್ವಂತ ಹಣದಿಂದಲೇ ಬಳ್ಳಾರಿಯಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದೆವು. ಸ್ಲಂ ಜನರಿಗೆ ಹೆಚ್ಚೆಚ್ಚು ಸೌಲಭ್ಯಗಳನ್ನು ನೀಡುವ ಮೂಲಕ ಅವರ ಜೀವನಶೈಲಿಯ ಮಟ್ಟ ಬದಲಾಗುವಂತೆ ಮಾಡಿದೆವು. ಇದರ ಪರಿಣಾಮ ಎಲ್ಲರೆದೆಯಲ್ಲೂ ಶ್ರೀರಾಮುಲು ಮನೆ ಮಾಡಿದರು. ಅದರ ಪರಿಣಾಮವಾಗಿ 2004 ರಲ್ಲಿ ಭರ್ಜರಿ ಬಹುಮತದೊಂದಿಗೆ ಶ್ರೀರಾಮುಲು ಶಾಸಕರಾಗಿ ಆಯ್ಕೆಯಾದರು. 2006 ಶ್ರೀರಾಮುಲು ಮಂತ್ರಿಯಾದರು.

ಈ ಮಧ್ಯೆ ಶ್ರೀ ರಾಮುಲು ಜೊತೆ ಜೊತೆಗೆ ನಾನು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವ ಸಂದರ್ಭ ಸೃಷ್ಟಿಯಾಯಿತು. ಶ್ರೀ ಮತಿ ಸುಷ್ಮಾ ಸ್ವರಾಜ್ ಅವರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡಿದೆ. ಬದಲಾದ ಸನ್ನಿವೇಶದಲ್ಲಿ ನಾನು ಬಳ್ಳಾರಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷನಾದೆ. ಎಲ್ಲಾ ವರ್ಗದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಳಹಂತದಿಂದ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಸಫಲನಾದೆ. ಬಳ್ಳಾರಿ ಮುನ್ಸಿಪಾಲ್ಟಿ ಎಲೆಕ್ಷನ್ ಗೆಲ್ಲುವ ಮೂಲಕ ಶುರುವಾದ ಬಿಜೆಪಿಯ ಗೆಲುವಿನ ಅಭಿಯಾನ ಬಳ್ಳಾರಿ ಜಿಲ್ಲೆಯ ಮೂಲಕ ಮೂವರು ಶಾಸಕರು ಹಾಗೂ ಒಬ್ಬ ಸಂಸದರು ಆಯ್ಕೆಯಾಗುವ ಹಂತದ ತನಕ ಬೆಳೆಯಿತು. ಇದು ಬಳ್ಳಾರಿಯ ಇತಿಹಾಸದಲ್ಲೇ ‘ಬಿಜೆಪಿ’ಗೆ ಸಿಕ್ಕ ದಿಗ್ವಿಜಯವಾಗಿತ್ತು ಎಂದರೆ ಅತಿಶಯೋಕ್ತಿಯಲ್ಲ. 2008 ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂತು. ಆ ಸಂದರ್ಭದಲ್ಲಿ ನಾನು ಕೂಡ ಸಚಿವನಾಗುವ ಸೌಭಾಗ್ಯ ಸಿಕ್ಕಿತು. ನಾನು ಅಧಿಕಾರದಲ್ಲಿದ್ದಾಗ ಆತ್ಮ ಮೆಚ್ಚುವಂತೆ ಜನಸೇವೆ ಮಾಡಿದೆನೆಂಬ ಖುಷಿಯಿದೆ. ನನ್ನ ದೃಷ್ಟಿಕೋನದಲ್ಲಿ ಹೇಳುವುದಾದರೆ ಬಳ್ಳಾರಿ ಜಿಲ್ಲೆಗೆ ಎಲ್ಲಾ ದಿಕ್ಕುಗಳಲ್ಲೂ ಅಭಿವೃದ್ಧಿ ಕಾಣುವ ಶಕ್ತಿಯಿದೆ. ಬಳ್ಳಾರಿಯಲ್ಲಿನ ಸಂಪನ್ಮೂಲ ಸಂಪದ್ಭರಿತವಾಗಿದೆ. ಬಳ್ಳಾರಿಯನ್ನು ಇಡೀ ಜಗತ್ತೇ ತಿರುಗಿ ನೋಡುವಂತಹ ಮಹಾನ್ ನಗರವಾಗಿಸುವ ಅವಶ್ಯಕತೆಯಿತ್ತು. ಅದನ್ನು ಸಾಧಿಸುವ ಹಾದಿಯಲ್ಲಿ ನಾನು ಮತ್ತು ಶ್ರೀ ರಾಮುಲು ಹೆಜ್ಜೆ ಹಾಕಿದ್ದೆವು.

Related posts

ತಂದೆಯೇ ನನ್ನ ಮೊದಲ ಗುರು

ತಂದೆಯೇ ನನ್ನ ಮೊದಲ ಗುರು

ನಾನು ಹುಟ್ಟಿದ್ದು 1967 ರಲ್ಲಿ… ನಮ್ಮ ತಂದೆ ಶಿಸ್ತಿನ ಸ್ವಭಾವದ ವ್ಯಕ್ತಿ. ನಾನು ಕೊನೆ ಮಗ ಎಂಬ ಕಾರಣಕ್ಕೆ ಅತಿ ಹೆಚ್ಚು ಪ್ರೀತಿಯೇ ಇತ್ತು. ನನ್ನ ಹುಟ್ಟುಹಬ್ಬವನ್ನು ಬಹಳ...

Posted
ನನ್ನ ಸಂಸ್ಥೆ ಬೆಳೆದಿದ್ದು ಜನಾಭಿಪ್ರಾಯದಿಂದಲೇ ಎಂದರೆ ತಪ್ಪಾಗಲಾರದು.

ನನ್ನ ಸಂಸ್ಥೆ ಬೆಳೆದಿದ್ದು ಜನಾಭಿಪ್ರಾಯದಿಂದಲೇ ಎಂದರೆ ತಪ್ಪಾಗಲಾರದು.

ಆ ಸಂದರ್ಭದಲ್ಲಿ ನಮ್ಮ ಕಂಪೆನಿಯ ಕೆಲಸ ಕಾರ್ಯಗಳಿಗಾಗಿ ಪ್ರಿಂಟಿಂಗ್‍ಗಾಗಿ ಹೆಚ್ಚು ಹಣ ವ್ಯಯಿಸಲಾಗುತ್ತಿತ್ತು. ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಾನೇ ಒಂದು ಪ್ರಿಂಟಿಂಗ್...

Posted
ಬಳ್ಳಾರಿಯಲ್ಲಿ ನಮ್ಮ ತಾಯಿಗೆ ‘ಮಹಾತಾಯಿ’ ಎಂಬ ಹೆಸರಿತ್ತು

ಬಳ್ಳಾರಿಯಲ್ಲಿ ನಮ್ಮ ತಾಯಿಗೆ ‘ಮಹಾತಾಯಿ’ ಎಂಬ ಹೆಸರಿತ್ತು

ನಮ್ಮ ತಾಯಿ ನಮ್ಮ ತಂದೆಯವರನ್ನು ಮದುವೆಯಾಗುವ ಸಂದರ್ಭದಲ್ಲಿ ಯಾವುದೇ ವಿದ್ಯಾಭ್ಯಾಸವನ್ನು ಮಾಡಿರಲಿಲ್ಲ. ಅಮ್ಮ ಮದುವೆಯಾದ ಬಳಿಕ ತಂದೆಯವರ ಜೊತೆಗೆ ಶಿಕ್ಷಣವನ್ನು ಪಡೆದರು...

Posted

Leave a Reply