ಸಮಾಜಸೇವೆಯಲ್ಲಿ ನಿಜವಾದ ಸಾರ್ಥಕತೆಯಿದೆ
1997 ರಲ್ಲಿ ನಮ್ಮ ತಂದೆಯ ಹೆಸರಿನಲ್ಲಿ ಬುದ್ದಿಮಾಂದ್ಯ ಮಕ್ಕಳ ಶಾಲೆಯನ್ನು ಆರಂಭಿಸಿದೆ. ಇಂದಿಗೂ ಅಲ್ಲಿ 110 ಕ್ಕೂ ಹೆಚ್ಚು ಬುದ್ದಿಮಾಂದ್ಯ ಮಕ್ಕಳ ಲಾಲನೆ-ಪಾಲನೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಯಾವುದೇ ಬಡ ಕುಟುಂಬದಲ್ಲಿ ಗಂಡ-ಹೆಂಡಿರಿಬ್ಬರು ಕೂಲಿ-ನಾಲಿ ಮಾಡಿದರೆ ಮಾತ್ರ ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯ. ಇಂತಹ ಕುಟುಂಬಗಳಲ್ಲಿ ಬುದ್ದಿಮಾಂದ್ಯ ಮಕ್ಕಳು ಹುಟ್ಟಿದಾಗ ತಂದೆ-ತಾಯಿಯ ಕಷ್ಟ ದುಪ್ಪಟ್ಟಾಗುತ್ತದೆ. ಇಬ್ಬರಲ್ಲೊಬ್ಬರು ಮನೆಯಲ್ಲೇ ಉಳಿದು ಮಗುವನ್ನು ನೋಡಿಕೊಳ್ಳಬೇಕಾದ ಸಂದರ್ಭ ಸೃಷ್ಟಿಯಾಗುತ್ತದೆ. ಇದರಿಂದ ಅವರ ಅರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಅಂತಹ ಮಕ್ಕಳನ್ನು ನಮ್ಮ ಸಂಸ್ಥೆಗೆ ಕರೆತಂದು ನಮ್ಮ ಸ್ವಂತ ಮಕ್ಕಳಿಗಿಂತಲೂ ಹೆಚ್ಚಾಗಿ ನೋಡಿಕೊಳ್ಳುವ ಮಾನವೀಯ ಗುಣದ ಸಿಬ್ಬಂದಿಯಿದ್ದಾರೆ. ಈ ಸಂಸ್ಥೆಯ ಯೋಜನೆಯ ನಿಲಾನಕ್ಷೆಯನ್ನು ಅಮ್ಮನಿಗೆ ತೋರಿಸಿ, ಇದು ಭವಿಷ್ಯದಲ್ಲಿ ಹೇಗೆ ಕೆಲಸ ಮಾಡುತ್ತದೆಂಬುದನ್ನು ತಿಳಿಸಿದ್ದೆ. 2004 ರಲ್ಲಿ ನನ್ನ ತಾಯಿಯವರಿಂದಲೇ ಈ ಸಂಸ್ಥೆಯ ಶಂಕುಸ್ಥಾಪನಾ ಕಾರ್ಯ ಮಾಡಿಸಿದ್ದೆ. ಇದರ ಕಾರ್ಯ ಪೂರ್ಣವಾಗಿ ಕಾರ್ಯಾರಂಭವಾಗುವ ಹೊತ್ತಿಗಾಗಲೇ ಅಮ್ಮ ಇನ್ನಿಲ್ಲವಾಗಿದ್ದರು. ಆದರೆ ಅಮ್ಮನ ಆಶೀರ್ವಾದ ಇಂದಿಗೂ ನಮ್ಮ ಮೇಲಿದೆ. ಈ ಸಂಸ್ಥೆ ಶ್ರೀ ಎಲ್.ಕೆ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅವರಿಂದ ಉದ್ಘಾಟನೆಯಾಯ್ತು. ಇಂದು ನಮ್ಮ ಸಂಸ್ಥೆ ದೇವರ ಮಕ್ಕಳು ಎಂದೇ ಕರೆಯಲ್ಪಡುವ ವಿಕಲಚೇತನರು ಹಾಗೂ ಬುದ್ದಿಮಾಂದ್ಯರನ್ನು ಸಲಹುವ ಕೆಲಸ ಮಾಡುತ್ತಿದೆ. ಕೊಪ್ಪಳ, ಬಳ್ಳಾರಿ, ರಾಯಚೂರು ಸುತ್ತ ಮುತ್ತಲ 500 ಕ್ಕೂ ಹೆಚ್ಚು ಬುದ್ದಿಮಾಂದ್ಯ ಮಕ್ಕಳಿಗೆ ಇದರಿಂದ ಅನುಕೂಲವಾಗಿದೆ. ಆ ಎಲ್ಲಾ ಮಕ್ಕಳ ಪೋಷಕರ ಕಣ್ಣಲ್ಲಿ ಕಾಣುವ ಖುಷಿಗೆ ಬೆಲೆ ಕಟ್ಟಲಾಗದು. ಇದರೊಂದಿಗೆ ಅದೇ ಸ್ಥಳದಲ್ಲಿ ಒಂದು ಗೋಶಾಲೆ, ಕೃಷ್ಣ ಮಂದಿರ, ವೃದ್ಧಾಶ್ರಮ ಎಲ್ಲವು ಇದೆ. ಇದು ನನ್ನ ಬದುಕಿನಲ್ಲಿ ಸಾರ್ಥಕತೆಯನ್ನು ಕೊಟ್ಟ ಕೆಲಸಗಳಲ್ಲೊಂದು.