ಸಚಿವ ಸ್ಥಾನ ನಾನು ಬಯಸದೇ ಬಂದ ಭಾಗ್ಯ
ನಾನು ಸಚಿವನಾಗಬಹುದು ಎಂದು ಕನಸು ಕಂಡವನಲ್ಲ. ನಾನು ಸಚಿವನಾಗಿದ್ದು ಸಹ ಅನಿರೀಕ್ಷಿತ ಸಂದರ್ಭದಲ್ಲಿ ಎಂಬ ಸಂಗತಿ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಇನ್ನು ವಿಶೇಷ ಸಂಗತಿಯೆಂದರೆ ನಾನು ಸಚಿವನಾಗುತ್ತಿದ್ದೇನೆ ಎಂಬ ಸಂಗತಿ ನಾನು ಪ್ರಮಾಣ ವಚನ ಸ್ವೀಕರಿಸಿದ ಹಿಂದಿನ ರಾತ್ರಿಯಷ್ಟೇ ತಿಳಿಯಿತು. ನಾಳೆ ಪ್ರಮಾಣ ವಚನ ಎಂದಾಗ ಹಿಂದಿನ ರಾತ್ರಿ ಅದು ಸಹ ಮಧ್ಯರಾತ್ರಿ ಸರಿ ಸುಮಾರು 2.30 ರ ಹೊತ್ತಿಗೆ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡ್ಯೂರಪ್ಪನವರು ಕರೆ ಮಾಡಿ ನಿಮ್ಮನ್ನು ಸಹ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದೇವೆ. ಬೆಳಿಗ್ಗೆ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗಿರಿ ಎಂದರು. ಆಗ ನಾನು ನನ್ನಣ್ಣ ಮತ್ತು ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ಸಿಕ್ಕರೆ ಸಾಕು ಎಂದೆ. ನೀವು ಸಮರ್ಥರೆಂದೇ ನಾನು ಸಂಪುಟಕ್ಕೆ ಕರೆದುಕೊಂಡಿದ್ದೇನೆ. ನೀವು ನಾಳೆ ಪ್ರಮಾಣವಚನ ಸಮಾರಂಭಕ್ಕೆ ಸಿದ್ಧರಾಗಿ ಬನ್ನಿ ಎಂದು ಹೇಳಿದರು. ಇದು ಅನಿರೀಕ್ಷಿತವಾಗಿದ್ದ ಕಾರಣ ನಾನು ಸೂಟಿನಲ್ಲಿಯೇ ಬಂದು ಪ್ರಮಾಣ ಸ್ವೀಕರಿಸಿದ್ದೆ. ಅಂದಿನ ತನಕ ನಾನೆಂದು ರಾಜಕಾರಣಿಗಳಂತೆ ವೈಟ್ ಅಂಡ್ ವೈಟ್ ಧರಿಸಿರಲಿಲ್ಲ. ಮಧ್ಯರಾತ್ರಿಯಲ್ಲಿ ಅಂಥದ್ದೊಂದು ಸಿಹಿ ಸುದ್ದಿ ಸಿಕ್ಕ ಕಾರಣ ನನಗೆ ವಿಶೇಷ ಪೋಷಾಕನ್ನು ಕೊಳ್ಳಲು ಸಹ ಸಾಧ್ಯವಾಗಲಿಲ್ಲ. ಹೀಗೆ ಸಚಿವ ಸ್ಥಾನ ಎಂಬುದು ನಾನು ಬಯಸದೇ ಬಂದ ಭಾಗ್ಯವಾಗಿತ್ತು. ಈಗ ನನಗೆ ಅನ್ನಿಸುತ್ತೆ.. ಒಂದು ವೇಳೆ ನಾನು ರಾಜಕೀಯಕ್ಕೆ ಬರದೇ ಉದ್ಯಮಿಯಾಗಿಯೇ ಉಳಿದಿದ್ದರೆ ಒಂದು ಲಕ್ಷಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಸೃಷ್ಟಿಸುತ್ತಿದ್ದೆ.