ಬಳ್ಳಾರಿಯಲ್ಲಿ ನಮ್ಮ ತಾಯಿಗೆ ‘ಮಹಾತಾಯಿ’ ಎಂಬ ಹೆಸರಿತ್ತು
ನಮ್ಮ ತಾಯಿ ನಮ್ಮ ತಂದೆಯವರನ್ನು ಮದುವೆಯಾಗುವ ಸಂದರ್ಭದಲ್ಲಿ ಯಾವುದೇ ವಿದ್ಯಾಭ್ಯಾಸವನ್ನು ಮಾಡಿರಲಿಲ್ಲ. ಅಮ್ಮ ಮದುವೆಯಾದ ಬಳಿಕ ತಂದೆಯವರ ಜೊತೆಗೆ ಶಿಕ್ಷಣವನ್ನು ಪಡೆದರು. ಬಳ್ಳಾರಿಯಲ್ಲಿ ನಮ್ಮ ತಾಯಿಗೆ ‘ಮಹಾತಾಯಿ’ ಅಂತಲೇ ಕರೆಯುತ್ತಾರೆ. ಕಾರಣವೇನೆಂದರೆ 1990 ರಲ್ಲಿ ನಮ್ಮ ತಂದೆ ನಿಧನರಾದ ಸಂದರ್ಭದಲ್ಲಿ ನಾನು ಕೇವಲ 20 ವರ್ಷದ ಹುಡುಗನಾಗಿದ್ದೆ. ಆಗ ನನ್ನ ಅಣ್ಣಂದಿರು ಸಹ ಪದವಿಯನ್ನು ಆಗಷ್ಟೇ ಮುಗಿಸಿದ್ದರು. ಆ ಸಂದರ್ಭದಲ್ಲಿ ಅಪ್ಪನ ಆಕಸ್ಮಿಕ ಸಾವಿನಿಂದಾಗಿ ಮಾನಸಿಕವಾಗಿ ಕುಗ್ಗಿದ್ದ ನಮಗೆ ಆತ್ಮಸ್ಥೈರ್ಯ ಹೆಚ್ಚಿಸಿದ್ದು ನಮ್ಮ ತಾಯಿ. ಅವರು ನಮಗಾಗಿ ದೃಢ ಮನಸ್ಸು ಮಾಡಿಕೊಂಡು ಬದುಕು ಕಟ್ಟಿದರು. ನಂತರದ ದಿನಗಳಲ್ಲಿ ನಾನು ಫೈನಾನ್ಸ್ ಕಂಪೆನಿ ನಡೆಸುತ್ತಿದ್ದೆ. ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಕರ್ನಾಟಕದಲ್ಲಿ ಒಟ್ಟು 125 ಬ್ರಾಂಚ್ಗಳನ್ನು ಆರಂಭಿಸಿದ್ದೆ. ಕೆಲಸದ ನಿಮಿತ್ತ ನಾನು ಬಳ್ಳಾರಿಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಯಾವುದೇ ಬ್ರಾಂಚ್ ಮ್ಯಾನೇಜರ್ ಕರೆ ಮಾಡಿ ಏನಾದರೂ ಸಮಸ್ಯೆಯನ್ನು ಹೇಳಿದರೆ ಅದನ್ನು ಮನಸ್ಸಿಟ್ಟು ಕೇಳಿಸಿಕೊಂಡು, ತಮಗೆ ಅರ್ಥವಾಗುವ ರೀತಿಯಲ್ಲಿ ಹೆಸರು, ಊರು ಬರೆದಿಟ್ಟುಕೊಂಡಿರುತ್ತಿದ್ದರು. ನಾನು ಮನೆಗೆ ಹಿಂದಿರುಗುವ ಹೊತ್ತಿಗೆ ನೂರಕ್ಕೂ ಹೆಚ್ಚು ಕರೆಗಳು ಬಂದಿರುತ್ತಿತ್ತು. ಆದರೆ ತಾವು ಬರೆದುಕೊಂಡ ಹೆಸರು, ಊರು ಗಮನಿಸಿದ ಕೂಡಲೇ ಅವರು ಈ ಕಾರಣಕ್ಕೆ ಕರೆ ಮಾಡಿದ್ದರು, ಅವರ ಸಮಸ್ಯೆ ಹೀಗೀಗಿದೆ ಎಂದು ಕರಾರುವಕ್ಕಾಗಿ ಹೇಳಿ ಬಿಡುತ್ತಿದ್ದರು. ಅಮ್ಮನ ನೆನಪಿನ ಶಕ್ತಿಯ ಅಗಾಧತೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿತ್ತು. ಇದರ ಜೊತೆಗೆ ಮನೆಗೆ ಯಾರೇ ಬಂದರೂ ಬರೀ ಕಾಫಿ ಟೀ ಕೊಟ್ಟು ಸುಮ್ಮನಾಗುತ್ತಿರಲಿಲ್ಲ. ಬಂದವರ ಹಸಿವು ತಣಿಸಿಯೇ ಕಳಿಸಬೇಕೆನ್ನುವ ಗುಣ ಅಮ್ಮನದು. 1999 ರಲ್ಲಿ ಸುಷ್ಮಾ ಸ್ವರಾಜ್ ಬಳ್ಳಾರಿಯಲ್ಲಿ ನಿಂತು ಸೋತ ಬಳಿಕವು ನಮ್ಮ ಅಮ್ಮ ಕಾರ್ಯಕರ್ತರನ್ನು ಮೊದಲಿಗಿಂತಲೂ ಹೆಚ್ಚು ಆತ್ಮೀಯತೆಯಿಂದ ನೋಡಿಕೊಂಡರು. ಬಳ್ಳಾರಿ ನಗರದಲ್ಲಿ ಹಳೇ ರಾಜಕಾರಣಿಗಳು ಯಾವ ರೀತಿಯ ಸಾರ್ವಭೌಮತ್ವ ಸೃಷ್ಟಿಸಿಕೊಂಡಿದ್ದರೆಂದರೆ ಶ್ರೀಸಾಮಾನ್ಯರು ಆ ರಾಜಕಾರಣಿಗಳ ಮನೆ ಮುಂದೆ ನಡೆಯುವಾಗ ತಮ್ಮ ಕಾಲಿನಲ್ಲಿರುವ ಚಪ್ಪಲಿ ತೆಗೆದು ಅದನ್ನು ಬಗಲಿಟ್ಟುಕೊಂಡು ತಲೆ ತಗ್ಗಿಸಿ ನಡೆಯಬೇಕಿತ್ತು. ಇಂಥದ್ದೊಂದು ಅನಿಷ್ಠ ಪದ್ದತಿ ಆ ದಿನಗಳಲ್ಲಿತ್ತು.
ಅಮ್ಮ ಹುಟ್ಟಿ ಬೆಳೆದದ್ದೆಲ್ಲಾ ಆಂಧ್ರದಲ್ಲಿ. ಅವರು ಮದುವೆಯಾಗಿದ್ದು ಕೂಡ 15ನೇ ವರ್ಷಕ್ಕೆ.. ಹೀಗಾಗಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಂಸಾರದ ಜವಾಬ್ದಾರಿ ಅಮ್ಮನ ಹೆಗಲೇರಿತು. ನಮ್ಮ ತಾಯಿಯ ಕುಟುಂಬದವರು ವೀರ ಬ್ರಹ್ಮೆಂದ್ರ ಸ್ವಾಮಿಗಳ ತತ್ವವನ್ನು ಪಾಲಿಸಿಕೊಂಡು ಬಂದಿದ್ದರು. ವೀರ ಬ್ರಹ್ಮೆಂದ್ರ ಸ್ವಾಮಿಗಳು ಜಾತ್ಯಾತೀತವಾಗಿ ಬದುಕಬೇಕು ಎಂಬ ಸಂದೇಶ ಸಾರಿದವರು. ಜಾತಿಗಿಂತ ನೀತಿ ಮುಖ್ಯ ಎಂಬ ಸಂದೇಶವನ್ನು ನಮ್ಮ ತಾಯಿ ಕೂಡ ನಂಬಿದ್ದರು. ಹೀಗಾಗಿ ಶ್ರೀರಾಮುಲು ಅವರನ್ನು ಸಹ ನನ್ನ ಅಮ್ಮ ಸ್ವಂತ ಮಗನಂತೆಯೇ ನೋಡಿಕೊಂಡರು. ಅಮ್ಮ ಸಾಯುವ ಕೆಲ ತಿಂಗಳ ಮೊದಲು ನನ್ನ ಅಂತಿಮ ಸಂಸ್ಕಾರ ಮಾಡುವಾಗ ನಿನ್ನೊಂದಿಗೆ ಶ್ರೀರಾಮುಲು ಕೂಡ ನನ್ನ ಚಿತೆಗೆ ಅಗ್ನಿಸ್ಪರ್ಶ ಮಾಡಬೇಕೆಂದು ಕೇಳಿಕೊಂಡಿದ್ದರು. ಶ್ರೀರಾಮುಲು ಅವರಿಗೆ ಬಳ್ಳಾರಿಯಲ್ಲಿ ಸಾಕಷ್ಟು ವಿರೋಧಿಗಳಿದ್ದರು. ಒಂದು ಹಂತದಲ್ಲಿ ಶ್ರೀರಾಮುಲು ಅವರ ಜೀವಕ್ಕೂ ಅಪಾಯವಿದ್ದಂತಹ ದಿನಗಳಿದ್ದವು. ಈ ಮಧ್ಯೆ ನನ್ನ ಮತ್ತು ಶ್ರೀರಾಮುಲು ಸ್ನೇಹ ಒಂದೇ ಜೀವ ಎರಡು ದೇಹ ಎನ್ನುವಂತಿತ್ತು. ಶ್ರೀರಾಮುಲು ವೈರಿಗಳು ನಮ್ಮ ತಾಯಿಗೆ ಬೆದರಿಕೆ ಕರೆ ಮಾಡಿ “ನಿಮ್ಮ ಮಕ್ಕಳಿಗೆ ಆ ಶ್ರೀರಾಮುಲು ಸಹವಾಸ ಬಿಡಲು ಹೇಳಿ, ಇಲ್ಲದಿದ್ದರೆ ಅನಾಹುತ ಗ್ಯಾರಂಟಿ” ಎಂದು ಧಮಕಿ ಹಾಕುತ್ತಿದ್ದರು. ಇಷ್ಟಾದರೂ ಅಮ್ಮ ಎಂದಿಗೂ ಎದೆಗುಂದಲಿಲ್ಲ. “ಹುಟ್ಟೋದು ಒಂದ್ಸಲ, ಸಾಯೋದು ಒಂದ್ಸಲ.. ಅದೇನು ಮಾಡ್ತಿರೋ ಮಾಡಿ. ಶ್ರೀರಾಮುಲುನನ್ನು ನಮ್ಮ ಕುಟುಂಬ ದೂರ ಇಡುವ ಪ್ರಶ್ನೆಯೇ ಇಲ್ಲ” ಎಂದು ಸಾರ್ವಜನಿಕ ಹೇಳಿದ್ದು ನನ್ನಮ್ಮನ ಗಟ್ಟಿತನಕ್ಕೆ ಸಾಕ್ಷಿ. ‘ನಮ್ಮಿಬ್ಬರ ಸ್ನೇಹ ಚಿರಕಾಲ ಹೀಗೆ ಇರಬೇಕು’ ಎಂಬುದು ನನ್ನ ಅಮ್ಮನ ಆಶಯವಾಗಿತ್ತು. ತೆಲುಗಿನ ಖ್ಯಾತ ತತ್ವಜ್ಞಾನಿ ಹಾಗೂ ಕವಿ ವೇಮನ ಚಿಂತನೆಗಳು ಅಮ್ಮನ ಮೇಲೆ ಪ್ರಭಾವ ಬೀರಿದ್ದವು. ವೇಮನ ಹುಟ್ಟಿನಿಂದ ರೆಡ್ಡಿ ಸಮುದಾಯಕ್ಕೆ ಸೇರಿದವನಾದರೂ ಸಮಾಜದ ಶೋಷಿತ ವರ್ಗದ ಪರವಾಗಿ ಧ್ವನಿ ಎತ್ತಿದಾತ.