ನನ್ನ ಹುಟ್ಟೂರು ಮತ್ತು ನನ್ನ ಬಾಲ್ಯ
ನನ್ನ ಜನ್ಮಸ್ಥಾನ ಬಳ್ಳಾರಿ. ಈಗ ಬಳ್ಳಾರಿ ಸಾಕಷ್ಟು ಅಭಿವೃದ್ಧಿಯಾಗಿದೆ. ಸಂಪೂರ್ಣವಾಗಿ ನಗರಪ್ರದೇಶವಾಗಿದೆ. ಆದರೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಾಗ ಬಳ್ಳಾರಿಯ ದುರ್ಗಮ್ಮ ಸಿಡಿಬಂಡೆ ಜಾತ್ರೆ ಹಾಗೂ ಕೋಟೆ ಮಲ್ಲೇಶ್ವರ ರಥೋತ್ಸವ ನೆನಪಾಗುತ್ತದೆ. ಅಲ್ಲದೇ ಬಳ್ಳಾರಿಯ ರಥಬೀದಿಯ ವೈಭವ ಕಣ್ಮುಂದೆ ಮರುಕಳಿಸುತ್ತದೆ. ಚಿಕ್ಕಂದಿನಲ್ಲಿ ನಾವು ಪ್ರತಿವರ್ಷ ಜಾತ್ರೆ ನಡೆಯುತ್ತಿದ್ದ ಆ ಎರಡು ದಿನಗಳನ್ನು ಎದುರು ನೋಡುತ್ತಿದ್ದೆವು. ನಮ್ಮ ತಂದೆ ತಾಯಿಗೆ ನಾವು ನಾಲ್ವರು ಮಕ್ಕಳು. ನಮ್ಮೆಲ್ಲರನ್ನು ಅಪ್ಪ-ಅಮ್ಮ ಜಾತ್ರೆಗೆ ಕರೆದೊಯ್ಯುತ್ತಿದ್ದರು. ಅಪ್ಪ ಕೊಡಿಸುತ್ತಿದ್ದ ಆಟದ ಸಾಮಾನುಗಳು ನೀಡುತ್ತಿದ್ದ ಖುಷಿಯೇ ಬೇರೆ. ಅಲ್ಲಿ ಒಟ್ಟಾಗಿ ಕುಳಿತು ಬಿಸಿ ಬಿಸಿ ಮಿರ್ಚಿ ಮಂಡಕ್ಕಿ ತಿಂದ ಕ್ಷಣ ಈ ಹೊತ್ತಿಗೂ ತುಂಬಾನೇ ನೆನಪಾಗುತ್ತದೆ. ಇಂದು ನಾವು ದೇಶ ದೇಶಗಳನ್ನು ಸುತ್ತಿ ಬಂದರೂ ಬಾಲ್ಯದ ನೆಮ್ಮದಿ ಮತ್ತೆಲ್ಲೂ ಕಾಣ ಸಿಗುವುದಿಲ್ಲ.