ಜೀವನಸ್ಪೂರ್ತಿ ಹೆಚ್ಚಿಸುವ ಹಾಡುಗಳು ನನಗಿಷ್ಟ
ಸಿನಿಮಾ ಮೇಲಿನ ನನ್ನ ಮೋಹ ಎಷ್ಟರ ಮಟ್ಟಿಗೆ ಇದೆಯೆಂದರೆ ನಾನು ಮಂತ್ರಿಯಾದ ಬಳಿಕವು ನನ್ನ ಬಹು ನಿರೀಕ್ಷೆಯ ಚಿತ್ರಗಳು ತೆರೆ ಕಂಡಾಗ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿದ್ದುಂಟು. ಆದರೆ ಹೀಗೆ ಸಿನಿಮಾ ನೋಡಲು ಹೋದಾಗ ಶ್ರೀಸಾಮಾನ್ಯರಿಗೆ ಇರಿಸು ಮುರಿಸು ಆಗಬಾರದು ಎಂಬ ಕಾರಣಕ್ಕೆ ಮನೆಯಲ್ಲಿಯೇ ಪುಟ್ಟ ಥಿಯೇಟರ್ವೊಂದನ್ನು ಮಾಡಿಸಿಕೊಂಡೆ. ಅಣ್ಣಾವ್ರ ಹಾಗೂ ಎನ್ಟಿಆರ್ ಅವರ ಚಿತ್ರಗಳು ಮನೋರಂಜನೆಯ ಜೊತೆಗೆ ಜೀವನಪಾಠವನ್ನು ಹೇಳುತ್ತಿದ್ದವು. ಕನ್ನಡದಲ್ಲಿ ಅದರಲ್ಲೂ ವಿಶೇಷವಾಗಿ ಅಣ್ಣಾವ್ರ ಚಿತ್ರದ ಹಾಡುಗಳಲ್ಲಿದ್ದ ಅರ್ಥ ಮತ್ತು ವಿಶೇಷತೆ ಎಂಥವರಿಗೂ ಸ್ಪೂರ್ತಿ ತುಂಬುವಂತಿತ್ತು. “ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..” ಎಂಬ ಹಾಡು ಎಂಥ ಬಂಡನೆದೆಯಲ್ಲೂ ದುಡಿದು ತಿನ್ನಬೇಕೆನ್ನುವ ಕನಸು ಹುಟ್ಟಿಸುತ್ತದೆ.
ನಾನು ಪ್ರತಿ ಬಾರಿ ಮಂತ್ರಾಲಯಕ್ಕೆ ಭೇಟಿ ನೀಡಿದಾಗ ರಾಯರ ಬೃಂದಾವನದಲ್ಲಿ ಕುಳಿತು ಹಾಡುವ ಹಾಡು ಡಾ.ರಾಜ್ಕುಮಾರ್ ಅವರು ಹಾಡಿರುವ ‘ದೇವತಾ ಮನುಷ್ಯ’ ಚಿತ್ರದ ‘ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ’ ಎಂಬ ಗೀತೆ. ಆ ಗೀತೆಯಲ್ಲಿನ ಪ್ರತಿ ಪದವೂ ಹೃದಯಕ್ಕೆ ತಟ್ಟುವಂತಿದೆ. ಆ ಸಾಲುಗಳು ರಾಜ್ಕುಮಾರ್ ಅವರ ಧ್ವನಿಯಲ್ಲಿ ಜೀವಂತಿಕೆ ಪಡೆದುಕೊಂಡಿದೆ. ಇನ್ನು ವಿಷ್ಣುವರ್ಧನ್ ಅವರು ‘ಜಿಮ್ಮಿಗಲ್ಲು’ ಚಿತ್ರಕ್ಕಾಗಿ ಹಾಡಿರುವ ‘ತುತ್ತು ಅನ್ನ ತಿನ್ನೋಕೆ’ ಎಂಬ ಹಾಡು ಕೂಡ ಮನಸ್ಸನ್ನು ಆವರಿಸಿಕೊಳ್ಳುವಂತಿದೆ. ಈ ಭೂಮಿ ಬಣ್ಣದ ಬುಗುರಿ ಹಾಡು ಕೂಡ ಮನುಷ್ಯನ ಜೀವನಕ್ಕೆ ಮತ್ತು ಬದುಕಿನ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಂತಿದೆ. ಈ ಮೂರು ಹಾಡುಗಳು ನಾನು ಜೈಲಿನಲ್ಲಿದ್ದ ಸಂದರ್ಭದಲ್ಲಿ ಮತ್ತೆ ಮತ್ತೆ ನೆನಪಾಗುತ್ತಿತ್ತು. ಈ ಹಾಡುಗಳಲ್ಲಿನ ಅರ್ಥ ಮತ್ತು ಜೀವನಸ್ಫೂರ್ತಿ ನನ್ನ ಆತ್ಮಸ್ಥೈರ್ಯ ಹೆಚ್ಚಿಸುತ್ತಿತ್ತು.