ಅಪ್ಪನಿಲ್ಲದ ನೋವು ಈ ಹೊತ್ತಿಗೂ ಕಾಡುತ್ತದೆ
ನನ್ನ ತಂದೆಯ ಕುಟುಂಬ ಮತ್ತು ತಾಯಿ ಕುಟುಂಬದವರು ಮೊದಲಿಂದಲೂ ಬಂಧುಗಳೇ ಆಗಿದ್ದರು. ನನ್ನ ತಂದೆ-ತಾಯಿಗೆ ಒಟ್ಟಾರೆಯಾಗಿ 20ಕ್ಕೂ ಹೆಚ್ಚು ಎಕರೆ ಜಮೀನಿತ್ತು. ಅದರಿಂದ ಬರುತ್ತಿದ್ದ ಆದಾಯ ಅಪ್ಪ ಪೊಲೀಸ್ ನೌಕರರಾಗಿ ಪಡೆಯುತ್ತಿದ್ದ ಸಂಬಳದ ನಾಲ್ಕು ಪಟ್ಟಿತ್ತು. ಹೀಗಾಗಿ ನಮ್ಮ ಬಾಲ್ಯದಲ್ಲಿ ಎಲ್ಲರನ್ನು ಅಪ್ಪ ಚೆನ್ನಾಗಿಯೇ ನೋಡಿಕೊಂಡರು. ಉತ್ತಮ ಶಿಕ್ಷಣ ನೀಡುವ ವಿಚಾರದಲ್ಲಿ ಆರ್ಥಿಕ ಮುಗ್ಗಟ್ಟು ನಮ್ಮನ್ನು ಎಂದಿಗೂ ಕಾಡಿರಲಿಲ್ಲ. ನಮ್ಮ ತಂದೆಗೆ ಮಹಾಭಾರತ, ರಾಮಾಯಣ ಬಗ್ಗೆ ವಿಶೇಷ ಪ್ರೀತಿಯಿತ್ತು. ಅದನ್ನು ಅವರೇ ನಮಗೆ ಓದಿ ಹೇಳುತ್ತಿದ್ದರು. ನಾವು ಬೆಳೆದಂತೆಲ್ಲಾ ಅದಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಕೊಂಡು ತಂದು ಓದುವಂತೆ ಪ್ರೇರೇಪಿಸುತ್ತಿದ್ದರು. ಅಪ್ಪ ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು. ನಾವು ಓದಿದ್ದನ್ನು ಹತ್ತು ಮಂದಿಗೆ ಹೇಳಿದಾಗ ಅದು ಸ್ಮೃತಿಪಟಲದಲ್ಲಿ ಅಚ್ಚಾಗಿ ಉಳಿಯುತ್ತದೆ.. ಎಂಬುದು ಅಪ್ಪನ ನಿಲುವಾಗಿತ್ತು. ನನ್ನ ಅನುಭವದಲ್ಲಿಯೂ ಅದು ನಿಜ. ಇನ್ನು ನಮ್ಮ ಸಂಸ್ಕೃತಿ, ಸಂಪ್ರದಾಯವನ್ನು ತುಂಬಾನೇ ಗೌರವಿಸುತ್ತಿದ್ದರು. ಎಲ್ಲಾ ಹಬ್ಬ-ಹರಿದಿನಗಳನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದರು. ಆ ಹಬ್ಬಗಳ ಆಚರಣೆಗಾಗಿಯೇ ಅವರು ಮಾಡುತ್ತಿದ್ದ ತಯಾರಿ ಕೂಡ ಬಹಳ ವಿಶೇಷವಾಗಿತ್ತು. ಇಷ್ಟೆಲ್ಲಾ ಸುಖ-ಸೌಖ್ಯಗಳ ನಡುವೆ ನಾವು ಬೆಳೆದವು. ಆದರೆ ನಾವು ದುಡಿಯುವ ಕಾಲಕ್ಕೆ ಅಪ್ಪ ನಮ್ಮೊಡನಿರಲಿಲ್ಲ.. ನಮ್ಮ ಯಶಸ್ಸನ್ನು ಅವರು ನೋಡಲಿಲ್ಲ ಎಂಬ ನೋವು ಈ ಹೊತ್ತಿಗೂ ಕಾಡುತ್ತದೆ. ನಾನು 20 ನೇ ವಯಸ್ಸಿನಲ್ಲಿದ್ದಾಗ ನಮ್ಮ ತಂದೆ ದೈವಾಧೀನರಾದರು.